Home / ರಾಜ್ಯ / 20 ವರ್ಷಗಳ ಬಳಿಕ ಗುರುಗಳನ್ನು ಸ್ಮರಿಸಿದ ಹಳೆಯ ವಿದ್ಯಾರ್ಥಿಗಳು: ಚಿನ್ನೇನಹಳ್ಳಿ ಶಾಲೆಯಲ್ಲಿ ಭಾವುಕ ಗುರುವಂದನ ಕಾರ್ಯಕ್ರಮ

20 ವರ್ಷಗಳ ಬಳಿಕ ಗುರುಗಳನ್ನು ಸ್ಮರಿಸಿದ ಹಳೆಯ ವಿದ್ಯಾರ್ಥಿಗಳು: ಚಿನ್ನೇನಹಳ್ಳಿ ಶಾಲೆಯಲ್ಲಿ ಭಾವುಕ ಗುರುವಂದನ ಕಾರ್ಯಕ್ರಮ

ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂದು ಅಪರೂಪದ ಮತ್ತು ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಗುರುವಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

20 ವರ್ಷಗಳ ಹಿಂದೆ ಇದೇ ಶಾಲೆಯ ಬೆಂಚುಗಳಲ್ಲಿ ಕೂತು ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಇಂದು ಮತ್ತೆ ಒಂದಾಗಿ ತಮ್ಮ ಪ್ರಿಯ ಗುರುಗಳನ್ನು ಭೇಟಿ ಮಾಡಿ ಗೌರವ ಸಲ್ಲಿಸಿದರು. ಹಲವು ವರ್ಷಗಳ ನಂತರ ಮತ್ತೆ ಒಂದಾಗಿ ಸೇರಿದ ಸ್ನೇಹಿತರು ತಮ್ಮ ಬಾಲ್ಯದ ನೆನಪುಗಳು, ಶಾಲೆಯ ದಿನಗಳು ಮತ್ತು ಗುರುಗಳ ಮಾರ್ಗದರ್ಶನವನ್ನು ನೆನೆದು ಭಾವುಕರಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳು, “ನಾವು ಇಂದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನಮ್ಮ ಜೀವನದ ನೆಲೆಯನ್ನಿಟ್ಟವರು ನಮ್ಮ ಗುರುಗಳೇ. ಅವರು ನೀಡಿದ ಶಿಕ್ಷಣ ಮತ್ತು ಶಿಸ್ತು ನಮ್ಮ ಬದುಕಿಗೆ ದಿಕ್ಕು ತೋರಿಸಿದೆ” ಎಂದು ಗುರುಗಳತ್ತ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಟಿ. ಅಶ್ವತ್ಥಯ್ಯ, ಮಂಜುನಾಥ್, ಡಿ.ಆರ್. ನಾಗರಾಜು, ಶ್ರೀನಿವಾಸ್ ನಾಯಕ್, ಎಂ.ಆರ್. ಸಿದ್ದರಾಮಯ್ಯ, ಮಂಜುಳಾ, ರಾಧಾ ಹಾಗೂ ಸರೋಜಮ್ಮ ಉಪಸ್ಥಿತರಿದ್ದು, ಎರಡು ದಶಕಗಳ ಹಿಂದಿನ ವಿದ್ಯಾರ್ಥಿ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊಂಡರು. ಗುರುಗಳು ಕೂಡ ತಮ್ಮ ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ಭೇಟಿಯಾದ ಸಂತೋಷವನ್ನು ವ್ಯಕ್ತಪಡಿಸಿದರು.

ಹಳೆಯ ವಿದ್ಯಾರ್ಥಿಗಳಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಂಜನೇಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗುರುಗಳ ಆಶೀರ್ವಾದ, ಸ್ನೇಹಿತರ ಪುನರ್ಮಿಲನ ಮತ್ತು ಹಳೆಯ ನೆನಪುಗಳ ಸಂಭ್ರಮದ ನಡುವೆ ಈ ಗುರುವಂದನ ಕಾರ್ಯಕ್ರಮ ಭಾವುಕ ಕ್ಷಣಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.


ವರದಿ: ಹರೀಶ್ ಸಿ.ಎ
ವಿಜ್ವಲ ಸುದ್ದಿ

Leave a Reply

Your email address will not be published. Required fields are marked *