ಮಧುಗಿರಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ದೊಡ್ಡ ಮರದಲ್ಲಿ ಉಂಟಾದ ಹುಳುಗಳ ಕಾಟದಿಂದ ಪಕ್ಕದಲ್ಲಿರುವ ಮನೆಗಳ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರದಿಂದ ನಿರಂತರವಾಗಿ ಬೀಳುತ್ತಿರುವ ಹುಳುಗಳು ಮನೆಗಳ ಕಿಟಕಿ ಬಾಗಿಲುಗಳ ಮೂಲಕ ಒಳನುಗ್ಗಿ ಅಡಿಗೆಮನೆ ಸೇರಿದಂತೆ ವಾಸಸ್ಥಳಗಳಲ್ಲೇ ಹರಡುತ್ತಿವೆ. ಇದರಿಂದ ಕುಟುಂಬ ಸದಸ್ಯರಿಗೆ ಊಟ ಮಾಡುವುದಕ್ಕೂ ಅಸಾಧ್ಯವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಗಳೊಳಗೆ, ಊಟದ ತಟ್ಟೆಗಳಲ್ಲಿ ಹಾಗೂ ಜನರ ಮೈಮೇಲೆ ಹುಳುಗಳು ಹರಿದು ಕರೆತ ಉಂಟು ಮಾಡುತ್ತಿದ್ದು, ಮಕ್ಕಳಲ್ಲಿ ಬೊಬ್ಬೆ ಹಾಗೂ ಚರ್ಮ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು
ಸ್ಥಳೀಯರು ದೂರಿದ್ದಾರೆ.
ವಿಶೇಷವಾಗಿ ರಾತ್ರಿ ಸಮಯದಲ್ಲಿ ಸಮಸ್ಯೆ ಹೆಚ್ಚು ತೀವ್ರವಾಗುತ್ತಿದ್ದು,
ನಿವಾಸಿಗಳು ಆತಂಕದಲ್ಲಿ ದಿನಕಳೆಯುತ್ತಿದ್ದಾರೆ.
ಈ ಕುರಿತು ಸ್ಥಳೀಯರು 2024ರಲ್ಲಿ ಅರಣ್ಯಇಲಾಖೆಗೆ ಲಿಖಿತ ಅರ್ಜಿ ಸಲ್ಲಿಸಿದ್ದರೂ, ಇದುವರೆಗೆ ಮರದ ಕೊಂಬೆಗಳನ್ನು ಕಡಿತಗೊಳಿಸುವುದು ಅಥವಾ ಹುಳು ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಎರಡು ವರ್ಷ
ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರಾದ ಪಾರ್ವತಮ್ಮ, ರತ್ನಮ್ಮ, ಜ್ಞಾನೇರ್ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಕ್ಷಣವೇ
ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಪಾಯಕಾರಿಯಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ತೊಂದರೆ ಅಗದಂತೆ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸ್ಥಳೀಯರ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-ವರದಿ: ಹರೀಶ್ ಸಿ.ಎ.














