Home / ರಾಜ್ಯ / ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಮಿಡಿಗೇಶಿಯಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದವರ ಸಭೆ

ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಮಿಡಿಗೇಶಿಯಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದವರ ಸಭೆ

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಕುಂದುಕೊರತೆಗಳ ಸಲುವಾಗಿ ವಿಶೇಷ ಸಭೆ ನಡೆಯಿತು.

ಸಭೆಗೆ ಸರ್ಕಲ್ಇನ್ಸ್ಪೆಕ್ಟರ್ ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮಿಡಿಗೇಶಿ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ರವೀಂದ್ರ ಸಂಕೋಲೆ ಹಾಗೂ ಪೊಲೀಸ್ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ದಲಿತ ಮುಖಂಡರು ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲೆ ಯಾವುದೇ ರೀತಿಯ ಶೋಷಣೆ ನಡೆಯಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ದೇವಸ್ಥಾನಗಳು, ಹೋಟೆಲ್‌ಗಳು, ಕ್ಷೌರಿಕ ಅಂಗಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ದಲಿತರ ಮೇಲೆ ಬೇಧಭಾವ ಅಥವಾ ಶೋಷಣೆ ನಡೆಸುತ್ತಿರುವುದು ಕಂಡುಬಂದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಇಂತಹ ಘಟನೆಗಳ ವಿರುದ್ಧ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ದಲಿತ ಮುಖಂಡರಾದ ಬೇಡತೂರು ತಿಪ್ಪೇಸ್ವಾಮಿ, ತಾಡಿ ನಾಗರಾಜ್, ಗರಣಿ ಶ್ರೀನಿವಾಸ್, ಮಿ ಡಿಗೇಶಿ ಆದಿನಾರಾಯಣ, ಚಿನ್ನೇನಹಳ್ಳಿ ಪಲ್ಲಪ್ಪ ಬಾಬು,ಮೂರ್ತಿ, ಬ್ರಹ್ಮ ಸಮುದ್ರ ಕರಿಯಣ್ಣ, ಭೂತಣ್ಣ ನೀರಕಲ್ಲು, ಚಿನ್ನೇನಹಳ್ಳಿ ನಾಗೇಂದ್ರ, ಹೊಸಹಳ್ಳಿ ತಿಪ್ಪೇಸ್ವಾಮಿ, ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಗ್ರಾಮಗಳಲ್ಲಿ ಸಮಾನತೆ, ಸೌಹಾರ್ದತೆ ಹಾಗೂ ಸಹಭಾವನೆ ಉಳಿಯಬೇಕು ಎಂಬುದು ಎಲ್ಲರ ಜವಾಬ್ದಾರಿ ಎಂದು ಮುಖಂಡರು ಹೇಳಿದರು.

ಪೊಲೀಸ್ ಇಲಾಖೆ ಸಾರ್ವಜನಿಕರ ಜೊತೆ ಸಮನ್ವಯ ಸಾಧಿಸಿ ಸಾಮಾಜಿಕ ನ್ಯಾಯ ಕಾಪಾಡಲು ಸದಾ ಸಿದ್ಧವಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಸಭೆಯ ಅಂತ್ಯದಲ್ಲಿ ದಲಿತ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಯಿತು.

ವರದಿ. ಹರೀಶ ಸಿ ಎ

Leave a Reply

Your email address will not be published. Required fields are marked *