ಮಧುಗಿರಿ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಣ ಪಣವಿಟ್ಟು ಇಸ್ಪೀಟ್ ಆಟ ಆಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಧುಗಿರಿ ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರಶೇಖರ್ ಎಂ.ಎಸ್. ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಬ್ಬದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಗಳಲ್ಲಿ ಗುಂಪುಗೂಡಿ ಜೂಜಾಟ ನಡೆಸುತ್ತಿರುವುದು ಕಂಡುಬಂದರೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 78 ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜೂಜಾಟ ನಡೆಸುವವರಷ್ಟೇ ಅಲ್ಲದೆ ಅದಕ್ಕೆ ಸ್ಥಳ ಒದಗಿಸುವವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಬ್ಬದ ಸಮಯದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಿದ್ದು, ಯಾವುದೇ ಸ್ಥಳದಲ್ಲಿ ಜೂಜಾಟ ನಡೆಯುತ್ತಿರುವುದು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಹಬ್ಬದ ಸಂಭ್ರಮದಲ್ಲಿ ಕಾನೂನು ಉಲ್ಲಂಘನೆ ಮಾಡುವ ಚಟುವಟಿಕೆಗಳಿಂದ ದೂರವಿದ್ದು, ಶಾಂತಿ ಮತ್ತು ಸೌಹಾರ್ದತೆಯಿಂದ ಯುಗಾದಿ ಹಬ್ಬವನ್ನು ಆಚರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಜ್ವಲ ಸುದ್ದಿ, ಮಧುಗಿರಿ.














